ಸುಭಾಷಿತ ಭಂಡಾರ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
 • ಜಗತ್ತಿನಲ್ಲಿ ಬುದ್ಧಿವಂತರು ದೊರಕಬಹುದು. ಆದರೆ ಅವರನ್ನು ಒಂದುಗೂಡಿಸುವ ಯೋಜಕರು ದೊರಕುವುದು ದುರ್ಲಭ. - ೧೪:೫೪, ೯ ಮಾರ್ಚ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
 • ಜೀವನದಲ್ಲಿ ಎಲ್ಲರಿಗೂ ಗೆಲ್ಲಲೇಬೇಕೆಂಬ ಬಯಕೆ ಇರುತ್ತದೆ. ಆದರೆ ಬಯಸಿದಂತೆ ನಡೆಯುತ್ತದೆ ಎಂದೇನೂ ಇಲ್ಲ. ಬಯಸಿದ್ದು ಈಡೇರದೇ ಇದ್ದಾಗ ದು:ಖಿಸುವ ಅಗತ್ಯವಿಲ್ಲ. ಎಲ್ಲಿ ತಪ್ಪಿದೆವು ಎಂದು ಅವಲೋಕಿಸಿರಿ. ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ ಗುರಿಯೊಂದಿಗೆ ಮುನ್ನಡೆಯಿರಿ.
 • ಯಶಸ್ಸಿನ ಬೆನ್ನ ಹಿಂದೆಯೇ ಅತ್ಮವಿಶ್ವಾಸದಿಂದ ಜೀವಿಸುವದನ್ನು ರೂಢಿಸಿಕೊಳ್ಳಿರಿ. ಯಶಸ್ಸನ್ನು ಒಲಿಸಿಕೊಳ್ಳಿರಿ.
 • ನಾಳಿನ ಅತ್ಯುತ್ತಮ ಯೋಜನೆಗಿಂತ ಇಂದಿನ ಉತ್ತಮ ಯೋಜನೆಯೇ ಲೇಸು. ಎಂದಿಗೂ ಸಮಾಧಾನದಿಂದ ಹಿಂದೆ ನೋಡಬೇಕು.
 • ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ.
 • ದ್ವೇಷ, ಹೊಟ್ಟೆಕಿಚ್ಚು ಎಂದರೆ ನಾವು ವಿಷವನ್ನು ಸೇವಿಸಿ ಬೇರೆಯವರೇ ಸಾಯಲಿ ಎಂದು ಬಯಸಿದಂತೆ. ಆದರೆ ದ್ವೇಷಕ್ಕೆ ಬಲಿಯಾಗುವವರು ನಾವು. ದ್ವೇಷ ನಮ್ಮನ್ನು ಮೊದಲು ಸಾಯಿಸುತ್ತದೆ. ದ್ವೇಷದಿಂದ ಯಾವ ಪ್ರಯೋಜನವೂ ಇಲ್ಲ.
 • ನಾವೊಬ್ಬರೇ ಪರಸ್ಪರರ ವಿಚಾರವನ್ನು ಮಾತನಾಡುವ ಬದಲು ಎಲ್ಲರ ಜೊತೆಗೆ ನೇರವಾಗಿ ಮಾತನಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
 • ಮಾತಿನ ಹಿಂದೆ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಮಾತು ಉತ್ತಮವಾಗಿ ಹೊರಡುತ್ತದೆ. ಮೊದಲು ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಕಲಿಯಬೇಕು.
 • ಒಂದು ನಿಮಿಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯನ್ನು ತರಲಿಕ್ಕೆ ಸಾಧ್ಯವಿಲ್ಲ. ಆದರೆ ಪ್ರತಿ ನಿಮಿಷವನ್ನು ಸದ್ಬಳಕೆಯನ್ನು ಮಾಡಿಕೊಂಡದ್ದೇ ಆದಲ್ಲಿ ಅಸಾಧಾರಣ ಪರಿವರ್ತನೆ ನಿಮ್ಮಲ್ಲಿ ಆಗುತ್ತದೆ ಎಂಬುದರಲ್ಲಿ ಸಂದೇಹವೇ ಬೇಡ. ಸಮಯವನ್ನು ಹಾಳು ಮಾಡಬೇಡಿ
 • ನಾವು ಪದೇ ಪದೇ ಏನನ್ನು ಹೇಳುತ್ತೇವೆಯೋ, ಯೋಚಿಸುತ್ತೇವೆಯೋ ಮತ್ತೆ ಮಾಡುತ್ತೇವೆಯೋ ಅದೇ ಆಗಿರುತ್ತೇವೆ. ಆದ್ದರಿಂದ ಸದಾ ಸಕಾರಾತ್ಮಕ ಸಂಗತಿಗಳ ಬಗ್ಗೆ ಯೋಚಿಸಬೇಕು. ಆಗಲೆ ಉತ್ತಮ ಸಾಧನೆ ಮಾಡಲು ಸಾಧ್ಯ.
 • ನಿಮ್ಮ ಬಗೆಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಟೀಕೆಗಳಿಗೆ ಎಷ್ಟೇ ಸಮಜಾಯಿಷಿ ಕೊಟ್ಟರೂ ಅದರಿಂದ ಜನರಿಗೆ ಮನವರಿಕೆಯಾಗುವುದಿಲ್ಲ. ನಿಮ್ಮ ಕೆಲಸ, ಸಾಧನೆಯೇ ಉತ್ತರವಾಗಬೇಕು. ಅದರ ಮುಂದೆ ಚಕಾರ ಎತ್ತಲಾರರು.
 • ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಒಂದು ಪಾಠವೆಂದು ಸ್ವೀಕರಿಸಿ. ಆಗ ಸಮಸ್ಯೆಗಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಪ್ರತಿ ಸಮಸ್ಯೆಯೂ ನಮಗೆ ಜೀವನ ಪಾಠವಾಗುತ್ತದೆ.
 • ನೀವು ಎಷ್ಟೇ ಉನ್ನತ ಹುದ್ದೆಗೇರಿದರೂ ತಲೆಬಾಗುವುದನ್ನು ತಪ್ಪಿಸಿಬೇಡಿ ಒಲಂಪಿಕ್ಸ್‍ನಲ್ಲಿ ಮೊದಲಸ್ಥಾನ ಗಳಿಸಿದವರೂ ಪದಕ ಹಾಕಿಸಿಕೊಳ್ಳುವಾಗ ತಲೆ ಬಾಗುತ್ತಾರೆ. ತಗ್ಗಿ-ಬಗ್ಗಿ ನಡೆದರೆ ಎಂದೂ ಅಪಾಯವಿಲ್ಲ.
 • ಸಮಸ್ಯೆಗಳಿಂದ ಓಡಿಹೋದರೆ ಪರಿಹಾರದಿಂದ ದೂರ ಹೋದಂತೆ (ಪಲಾಯನ ವಾದ). ಸಮಸ್ಯೆ ಎದುರಾದಾಗ ಧೈರ್ಯದಿಂದ ಎದುರಿಸಬೇಕೇ ಹೊರತು ಪಲಾಯನ ಮಾಡಬಾರದು.
 • ನಾನು ಸಾಮಾನ್ಯನಲ್ಲ, ನನ್ನಲ್ಲಿ ಅಸಾಧಾರಣ ಸಾಮಥ್ರ್ಯವಿದೆ ಎಂದು ಭಾವಿಸಿ. ಏಕೆಂದರೆ ದೇವರು ನಿರುಪಯುಕ್ತ ವ್ಯಕ್ತಿಯನ್ನು ಸೃಷ್ಟಿಸುವುದಿಲ್ಲ ಎಂದು ತಿಳಿಯಿರಿ. ನಿಮ್ಮ ಹಾಗೂ ಬೇರೆಯವರ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ.
 • ಪ್ರತಿಯೊಂದು ವಿಚಾರದ ಬಗ್ಗೆ ಎರಡು ವಿಧಗಳಲ್ಲಿ ಚಿಂತಿಸಬಹುದು-ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ. ಧನಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ಸಂತೋಷ ತರುತ್ತದೆ. ಋಣಾತ್ಮಕವಾಗಿ ಚಿಂತಿಸಿದಾಗ ಅದು ದು:ಖಕ್ಕೆ ಕಾರಣವಾಗುತ್ತದೆ. ಹಾಗಾಗಿ ನಾವು ಎಂದಿಗೂ ಧನಾತ್ಮಕವಾಗಿ ಚಿಂತಿಸಿ ಸಂತೋಷವಾಗಿರೋಣ.
 • ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು. ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ. ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ. ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು.
 • ನಾವು ಇಂದು ಏನಾಗಿದ್ದೇವೋ ಅದಕ್ಕೆ ನಮ್ಮ ಯೋಚನೆಗಳೇ ಕಾರಣ. ನಮ್ಮನ್ನು ರೂಪಿಸುವುದು ನಮ್ಮ ಆಲೋಚನೆಗಳು. ಆದ್ದರಿಂದ ನಮ್ಮ ಆಲೋಚನೆಗಳು ಸರಿಯಾಗಿರಬೇಕು. ಮಾತಿಗಿಂತ ಚಿಂತನೆ ಮುಖ್ಯ. ನಮ್ಮ ಆಲೋಚನೆಗಳು ಸದಾ ನಮ್ಮ ಏಳಿಗೆಗೆ ಪೂರಕವಾಗಿರಬೇಕು.
 • ಉತ್ತಮ ನಡತೆ ಮತ್ತು ಮನಸ್ಸು ಇವೆರಡನ್ನೂ ಬೆಳೆಸಿಕೊಳ್ಳಬೇಕಾದದ್ದು ಅನಿವಾರ್ಯ. ಏಕೆಂದರೆ ಇವುಗಳು ಒಂದಕ್ಕೊಂದು ಹೊಂದಿಕೊಂಡಾಗ ಮಾತ್ರ ನಿಮಗೆ ಮತ್ತು ಇತರರಿಗೆ ತಾತ್ಕಾಲಿಕ ಹಾಗೂ ಶಾಶ್ವತ ಆನಂದಗಳು ದೊರೆಯುವುದು ಸಾಧ್ಯ.
 • ಅಸಾಧ್ಯವೆಂಬುದು ಒಂದು ಪದವಲ್ಲ. ಪ್ರಯತ್ನ ಮಾಡದೇ ಇರುವುದಕ್ಕೆ ಕೈಲಾಗದವರು ಕೊಡುವ ಒಂದು ಕಾರಣ. ಪ್ರಯತ್ನಪಟ್ಟರೆ ಎಲ್ಲವನ್ನೂ ಸಾಧಿಸಬಹುದು. ಅನೇಕ ಬಾರಿ ನಾವು ಪ್ರಯತ್ನವನ್ನೇ ಮಾಡಿರುವುದಿಲ್ಲ.
 • ತಪ್ಪು ಮಾಡಬಾರದು. ಒಂದೊಮ್ಮೆ ತಪ್ಪು ಮಾಡಿದರೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಾರದು. ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಮಾಡದ ತಪ್ಪಿನಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ತಿದ್ದಿಕೊಳ್ಳುವುದು.[೧]

ಉಲ್ಲೇಖ[ಸಂಪಾದಿಸಿ]