ಶ್ರೀಧರ ಸ್ವಾಮಿಗಳು.

ವಿಕಿಕೋಟ್ದಿಂದ

ಶ್ರೀ ಶ್ರೀಧರ ಸ್ವಾಮಿಗಳವರ ಸತ್ಯೋಕ್ತಿಗಳು[ಸಂಪಾದಿಸಿ]

ಇವು ವರದಪುರದ ಮಹಾಯೋಗಿ ಶ್ರೀ ಶ್ರೀಧರ ಸ್ವಾಮಿಗಳವರ ಸತ್ಯೋಕ್ತಿಗಳು.

೧)" ರಾಮನಾಮವೆಂದರೆ ಇದು ಎಲ್ಲ ಸಜ್ಜನರ ಜೀವನವೇ ಸರಿ. ಅವರು ಬಾಳಿ ಬದುಕುವುದು ಈ ರಾಮನಾಮದಿಂದಲೇ. ರಾಮನಾಮವೇ ಅವರ ಜೀವನದ ಅನ್ನ."

೨)" ಈ ರಾಮನಾಮದಿಂದ ಆತ್ಮಸಾಕ್ಷಾತ್ಕಾರವಾಗುತ್ತದೆ ಎಂಬುದು ಅನೇಕ ಜನರ ಅನುಭವ. ಶ್ರೀ ಸಮರ್ಥರು ಹನ್ನೆರಡು ವರ್ಷ 'ಶ್ರೀ ರಾಮ ಜಯರಾಮ ಜಯ ಜಯ ರಾಮ' ಈ ತ್ರಯೋದಶಾಕ್ಷರೀ ರಾಮಮಂತ್ರದ ಪುರಶ್ಚರಣೆಯನ್ನು ಮಾಡಿದರು. ಅದರಿಂದಲೇ ಜಗತ್ತನ್ನು ಉದ್ಧರಿಸುವ ಸಾಮರ್ಥ್ಯವು ಅವರಲ್ಲಿ ಬಂತು".

೩)" ತಾನು ತನ್ನ ಉದ್ಧಾರಮಾಡಿಕೊಂಡು ಪರರನ್ನು ಉದ್ಧರಿಸಬೇಕು ಇದು ಒಂದು ಶಿಷ್ಟಾಚಾರ. ಇದು ಒಂದು ಜೀವಿತದ ವ್ಯವಹಾರ, ಜೀವನ,ಜೀವನದ ಗುರಿ,ಮೋಕ್ಷೋಪಾಯ".

೪) " ಸಮರ್ಥರು ರಾಮನಾಮದ ಪ್ರಭಾವದಿಂದ ಅಥವಾ ಸಾಮರ್ಥ್ಯದಿಂದ ಸ್ವಾರಾಜ್ಯ ಮತ್ತು ಸ್ವರಾಜ್ಯ ಈ ಎರಡನ್ನೂ ಸಂಪಾದಿಸಿದ್ದರು. ಸ್ವಾರಾಜ್ಯ ಎಂದರೆ ಮೋಕ್ಷ, ಸ್ವರಾಜ್ಯ ಅಂದರೆ ದೇಶದ ಸ್ವಾತಂತ್ರ್ಯ. ಈ ಎರಡರ ಪ್ರಾಪ್ತಿಯೂ ಅವರಿಗಾಯಿತು".

೫) " ಜಗತ್ತಿನಲ್ಲಿ ಸರ್ವರೂ ನನ್ನನ್ನು ಸರ್ವಧರ್ಮಪ್ರತಿಪಾದ್ಯನಾದ ಪರಮಾತ್ಮನೆಂದು ಕಾಣಬೇಕು.ನಾನು ಆಯಾ ಧರ್ಮದ ಅನುಯಾಯಿಗಳಿಗೆ ಆಯಾ ಧರ್ಮದ ಪ್ರಭುವಾಗಿ ಕಂಡು ನನ್ನ ಮೂಲಕ ಅವರೆಲ್ಲರಿಗೂ ಶಾಶ್ವತ ಸತ್ಯಸುಖವು ದೊರಕುವಂತಾಗಬೇಕೆಂಬುದೇ ನನ್ನ ಧ್ಯೇಯ".

೬) "ಈ ರಾಮನಾಮವನ್ನು ಉಚ್ಚರಿಸಲು ವರ್ಣ, ಧರ್ಮ,ಜಾತಿ ಯಾವುದೂ ಇಲ್ಲ. ಕೊನೆ ಕೊನೆಯಲ್ಲಿ ಈ ನಾಮಸ್ಮರಣದ ಪ್ರಭಾವದಿಂದ ದೇಹದ ಅಭಿಮಾನವೆಲ್ಲ ಕಳೆದುಹೋಗಿ ಆತ್ಮಸ್ವರೂಪದ ಸಾಕ್ಷಾತ್ಕಾರವಾಗುತ್ತದೆ. ಆಮೇಲೆ ನಾನು ಇಂತಹ ವರ್ಣದವನು , ಧರ್ಮದವನು, ಜಾತಿಯವನು ಎಂಬಂತಹ ಭಾವನೆಯು ಬಿಟ್ಟುಹೋಗಿ ಆತ್ಮಸ್ವರೂಪದ ಸಾಕ್ಷಾತ್ಕಾರವಾಗಿ ಆ ಪರಮಾತ್ಮನಲ್ಲಿ ನಾನೆಂಬ ಅರಿವು ಕರಗಿಹೋಗುತ್ತದೆ".

೭) " ರಾಮಮಂತ್ರವು ವಟಬೀಜದಂತೆ ( ಅರಳಿ) . ವಿಶಾಲವಾದ ವಟವ್ರಕ್ಷಕ್ಕೆ ಸೂಕ್ಷ್ಮವಾದ ವಟಬೀಜವು ಹೇಗೆ ಕಾರಣವೋ ಹಾಗೆಯೇ ರಾಮಮಂತ್ರಕ್ಕೆ ಪ್ರಣವವೇ ಮೊದಲಿನ ರೂಪವು ಅಥವಾ ರಾಮಮಂತ್ರದ ಯಥಾರ್ಥರೂಪವೇ ಪ್ರಣವ."

೮) " ಮನನ ಮಾಡುವಂತಹದ್ದೇ ಮಂತ್ರ, ಉದ್ಧರಿಸುವಂತಹದ್ದು ಮಂತ್ರ. ಇದರ ಮನನ ಅಂದರೆ ತನ್ನ ಪರಬ್ರಹ್ಮ ಸ್ವರೂಪ ವಾಚಕವೇ ಈ ಮಂತ್ರವಿದೆ ಎಂದು ತಿಳಿದುಕೊಳ್ಳುವುದು. ತಿಳಿದುಕೊಂಡು ಇದರ ಜಪ ಮಾಡಿದರೆ ಪರಬ್ರಹ್ಮ ಸ್ವರೂಪದ ಸಾಕ್ಷಾತ್ಕಾರವು ಆಗಿಯೇ ಆಗುವುದು."

೯) " ಸುಖದ ಇಚ್ಛೆ ಏನೋ ನಮಗೆ ಇದೆ. ಆದರೆ ಸುಖಯಾವುದು? ಎಂಬುದು ನಮಗೆ ಗೊತ್ತಾಗದು. ಅದನ್ನು ನಿಜವಾದ ರೀತಿಯಿಂದ ಕಂಡುಹಿಡಿದು , ಅದನ್ನು ಹೊಂದಿ, ನಾವು ಈ ಜೀವಿತದ ಸಾಫಲ್ಯತೆಯನ್ನು ಕಂಡುಹಿಡಿದು ಕ್ರತಕ್ರತ್ಯರಾಗಬೇಕಾಗಿದೆ. ಅದು ಒಳಗಿದೆ. ಅದು ಅರಿವಿನ ರೂಪವಿದೆ."

೧೦) " ಬಾಹ್ಯಪದಾರ್ಥಗಳನ್ನು ಹೊಂದಲು ಪ್ರಯತ್ನಮಾಡಿ, ಅವುಗಳನ್ನು ಹೊಂದಿರುವಂತೆ , ಮುಂದೆ ಹೊಂದುವಂತೆ, ಪರಮಾತ್ಮನೇ ಸುಖವೆಂದು ಭಾವಿಸಿ, ಪ್ರಯತ್ನ ಮಾಡಿದರೆ , ಆತನ ಪ್ರಾಪ್ತಿಯು ಖಂಡಿತವಾಗಿಯೂ ಆಗುವುದು. ಆತನ ಪ್ರಾಪ್ತಿಯಾಗುವುದಕ್ಕಾಗಿ ಪ್ರಯತ್ನ, ಸಾಧನೆ ಏನು? ಅಂದರೆ , ಆತನನ್ನು ಅರಿತುಕೊಳ್ಳುವುದು."

೧೧)" ಪರಮಾತ್ಮನನ್ನು ತಿಳಿದ ಕೂಡಲೇ ಹರ್ಷ, ಶೋಕ, ರಾಗ, ದ್ವೇಷ ಮುಂತಾದ ಅಸಮಾಧಾನಕ್ಕೆ ಕಾರಣವಾಗುವಂತಹ ನಮ್ಮ ಎಲ್ಲ ಕೊರತೆಯ ಬಾಳು ಸಂಪೂರ್ಣ ನಷ್ಟವಾಗುವುದು".

೧೨) " ಸೀತಾರಾಮರಲ್ಲಿ ಭೇದವಿಲ್ಲದೇ ಏಕರೂಪದಿಂದಲೇ ಪೂಜ್ಯರಾಗಿದ್ದಾರೆ.ಸೀತೆ ಅಂದರೆ ಜ್ಞಾನಶಕ್ತಿ. ಪರಮಾತ್ಮನ ಅರಿವು ಉಂಟುಮಾಡುವ ಶಕ್ತಿ. ಪರಮಾತ್ಮನ ಅರಿವು ಪರಮಾತ್ಮನಿಗೆ ಅಭಿನ್ನವಾದುದೇ ಆದ್ದರಿಂದ ಈ ಅರಿವಿನ ರೂಪವಾಗಿರುವಂತಹ ಸೀತೆಯು ರಾಮನಿಗೆ ಅಭಿನ್ನವಾದುದೇ ಸರಿ. ಆದ್ದರಿಂದ ಸೀತಾರಾಮರು ಒಂದೇ ರೂಪ".

೧೩ " ಬಂಧವು ಯಾವತ್ತೂ ದುಃಖರೂಪವಾಗಿ ಇರುವುದು. ಹಗ್ಗದಿಂದ ಅಥವಾ ಸಂಕೋಲೆಯಿಂದ ಕಟ್ಟಿಹಾಕಿದರೆ ಅದು ದುಃಖವೇ ಅಲ್ಲವೇ?ಆ ಬಂಧದಿಂದ ಬಿಡುಗಡೆ ಆಗುವುದೇ ಮೋಕ್ಷ".

೧೪)" ದ್ವೈತ ಅಂದರೆ ಮಾಯೆಯ ಲಕ್ಷಣ, ಇದನ್ನು ಹೋಗಲಾಡಿಸಿಕೊಳ್ಳುವುದು ಅಂದರೆ ಅದ್ವೈತದ ಪ್ರಾಪ್ತಿಯೇ ಪರಮಾತ್ನನ ಪ್ರಾಪ್ತಿ. ಅದ್ವೈತನಾಗಿ ಬಾಳುವುದೇ , ಅದ್ವೈತಸ್ವರೂಪನಾಗಿ ಇರುವಂತಹ ಪರಮಾತ್ಮನಲ್ಲಿ ಎರಕವಾಗಿ ಹೋಗುವುದೇ ಬ್ರಹ್ಮಸಾಕ್ಷಾತ್ಕಾರ. ಅಂತಹ ಅದ್ವಿತೀಯ ಸ್ಥಿತಿಯಲ್ಲಿ ಮಾಯೆ ಎಂಬಂತಹ ಶಬ್ದವು ಇರುವುದಿಲ್ಲ. ಅಲ್ಲಿರುವುದು ಆನಂದ ಘನಸ್ವರೂಪವೊಂದೇ."

೧೫) " ರಾಮನ ಹಾಗೆ ನಡೆದುಕೊಳ್ಳುವುದು ಧರ್ಮ. ರಾವಣನ ಹಾಗೆ ನಡೆದುಕೊಳ್ಳುವುದು ಅಧರ್ಮ. ಹೀಗೆ ಧರ್ಮಾಧರ್ಮದ ವ್ಯಾಖ್ಯೆಯನ್ನು ವಿಂಗಡಿಸಿ ಧರ್ಮಪ್ರವ್ರತ್ತಿಯನ್ನುಂಟುಮಾಡುವುದಕ್ಕಾಗಿ ರಾಮಾಯಣದ ಅವತಾರವಾಯಿತು."

೧೬)" ತನ್ನಂತೇ ಪರರನ್ನು ಮಾಡುವುದು ಮನುಷ್ಯರ ಸ್ವಭಾವ. ಜೀವನ್ಮುಕ್ತರು ತನ್ನಂತೇ ಪರರನ್ನೂ ಜೀವನ್ಮುಕ್ತರನ್ನಾಗಿ ಮಾಡುತ್ತಾರೆ. ಧರ್ಮಿಷ್ಠರು ತನ್ನಂತೇ ಪರರನ್ನೂ ಧರ್ಮಿಷ್ಠರನ್ನಾಗಿ ಮಾಡುತ್ತಾರೆ. ನೀತಿವಂತರು ತನ್ನಂತೇ ಪರರನ್ನೂ ನೀತಿವಂತರನ್ನಾಗಿ ಮಾಡುತ್ತಾರೆ".

೧೭) "ಗುರುವಿಗಿಂತಲೂ ಹೆಚ್ಚಿನವನು ಇಲ್ಲವೇ ಇಲ್ಲ. ಆದ್ದರಿಂದ ಗುರುವಿನ ಸೇವೆ ಮನಮುಟ್ಟಿ ಮಾಡಬೇಕು".

೧೮) "ಯಾವನು ಬ್ರಹ್ಮಜ್ಞಾನವನ್ನು ಉಪದೇಶಿಸುವನೋ, ಅಜ್ಞಾನ ಅಂಧಕಾರವನ್ನು ನಷ್ಟಪಡಿಸುವನೋ ಮತ್ತು ಜಿವಾತ್ಮನನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವನೋ ಅವನೇ ಸದ್ಗುರು"

೧೯)"ತಾನು ಒಳ್ಳೆಯವನಾಗಿ ನಡೆದುಕೊಂಡು ಪರರಿಗೂ ಬೋಧಿಸಬೇಕು. ತನ್ನ ಆಚರಣೆಯೇ ಒಂದು ಉಪದೇಶ ಎಂದು ಇಟ್ಟುಕೊಳ್ಳಬೇಕು. ಇದು ಮನುಷ್ಯ ಧರ್ಮದ ಲಕ್ಷಣ,ಮನುಷ್ಯ ದೇಹದ ಲಕ್ಷಣ".

೨೦) " ಸಮರ್ಥ ರಾಮದಾಸರ ಅವತಾರವೂ ರಾಮನವಮಿಯ ದಿವಸವೇ ಆಯಿತು. ಧರ್ಮಸ್ಥಾಪನೆಯು ರಾಮದೇವರಿಗೆ ಹೇಗೆ ಗುರಿಯಾಗಿತ್ತೋ ಹಾಗೆಯೇ ಸಮರ್ಥರ ಗುರಿಯೂ ಆಗಿತ್ತು".

೨೧) " 'ಗ' ಅಕ್ಷರವು ಜ್ಞಾನಾರ್ಥವಾಚಕ,ಅಂದರೆ ಜ್ಞಾನಾರ್ಥಬೋಧಕ. 'ಣ' ನಿರ್ವಾಣ ಅಂದರೆ ಮೋಕ್ಷವಾಚಕ. ಜ್ಞಾನ ಮತ್ತು ಮೋಕ್ಷ ಈ ಎರಡರ ಅಧೀಶ್ವರ ಅಂದರೆ ಪರಬ್ರಹ್ಮವೇ ಸರಿ. ಹೀಗ ಜ್ಞಾನ ಮತ್ತು ಮೋಕ್ಷ ಕೊಟ್ಟ ಈ ಜೀವಿಗೆ ಈ ಸಂಸಾರದ ಸುಳಿಯಿಂದ ತಪ್ಪಿಸುವ ಆ ಸಾಕ್ಷಾತ್ ಪರಬ್ರಹ್ಮವೇ ಗಣೇಶ." ೨೨) " ಎಲ್ಲ ವಿಧದಿಂದಲೂ ಭಕ್ತರನ್ನು ಬಲಿಷ್ಠರನ್ನಾಗಿ ಮಾಡಿ, ಆ ಬಲವನ್ನು ಒದಗಿಸಿಕೊಡುವುದಕ್ಕಾಗಿ ಕಾರಣವಾಗಿರುವಂತಹ ಬ್ರಹ್ಮವಿದ್ಯೆಯನ್ನು ನೀಡಿ, ತನ್ನ ಬ್ರಹ್ಮ ಸಾಯುಜ್ಯ ತನ್ನ ಸ್ವರೂಪದ ಸಾಯುಜ್ಯ ಕೊಡುವಂತಹ ಆ ಪರಬ್ರಹ್ಮವೇ ಗಣೇಶನು, ಏಕದಂತನು".

೨೩) " ವಿಪತ್ತನ್ನು ಹೋಗಲಾಡಿಸತಕ್ಕವನು ಯಾವಾತನೋ ಅವನೇ ವಿಘ್ನನಾಯಕನು., ವಿಘ್ನೇಶ್ವರನು ,ವಿಘ್ನನಾಶಕನು.ಹೀಗೆ ವಿಘ್ನ ನಾಯಕ ಎಂಬ ಶಬ್ದದಲ್ಲಿ ಆಪತ್ತನ್ನು ನಷ್ಟಪಡಿಸುವವನು ಎಂಬ ಅರ್ಥವಿದೆ." ೨೪) " ಆನಂದವೇ ನಾನು, ಆನಂದವೇ ನೀವು,ಆನಂದವೇ ಈ ಎಲ್ಲ ಜಗತ್ತು,ಈ ನಿರ್ವಿಕಲ್ಪ ಅದ್ವಿತೀಯ ಆನಂದದ ಹೊರತು ಇನ್ನೊಂದಿಲ್ಲ ಎಂಬುದೇ ಸತ್ಯ."

ನೋಡಿ.[ಸಂಪಾದಿಸಿ]