ಮಿಲ್ಟನ್ ಫ್ರೇಡ್ ಮಾನ್

ವಿಕಿಕೋಟ್ದಿಂದ

* ಹೆಚ್ಚು ಹೆಚ್ಚು ಮಂದಿಗೆ ಉದ್ಯೋಗ ನೀಡಬೇಕು ಎಂದರೆ, ಕಾರ್ಮಿಕರಿಗೆ ಗುದ್ದಲಿ-ಸಲಿಕೆ ಬದಲು ಚಮಚ-ಫೋರ್ಕುಗಳನ್ನು ನೀಡಿ. . (ಭಾಕ್ರಾ-ನಂಗಲ್ ಆಣೆಕಟ್ಟು ಕಟ್ಟುವ ಕಾಮಗಾರಿಯನ್ನು ಟ್ರಾಕ್ಟರ್ ಮತ್ತು ಜೆಸಿಬಿ ಬದಲು ದೈಹಿಕ ಶ್ರಮಕ್ಕೆ ಒತ್ತು ನೀಡಿ ಮಾಡುತ್ತಿರುವುದನ್ನು ವೀಕ್ಷಿಸಿ, ಪ್ರಧಾನಿ ನೆಹರುರಿಗೆ ನೀಡಿದ ಸಲಹೆ)

  • ಉದ್ಯೋಗ ಹೆಚ್ಚಿಸುವುದೇ ಗುರಿಯಲ್ಲ. ಹೆಚ್ಚು ಉತ್ಪಾದನೆ ಮಾಡುವುದು ಗುರಿಯಾಗಬೇಕು.
  • ‌ ಮುಕ್ತ ಅಥವಾ ಸ್ವತಂತ್ರ ಮಾರುಕಟ್ಟೆಯ ವಿರುದ್ಧದ ವಾದಗಳು, ಬಹುತೇಕ ಮುಕ್ತತೆ ಮತ್ತು ಸ್ವಾತಂತ್ರದ ವಿರುದ್ಧವೇ ಇರುತ್ತವೆ.
  • ಸ್ವಾತಂತ್ರದ ಬದಲು ಸಮಾನತೆ ಆಯ್ದುಕೊಳ್ಳುವ ಸಮಾಜ, ಸ್ವಾತಂತ್ರ ಮತ್ತು ಸಮಾನತೆ ಎರಡನ್ನೂ ಕಳೆದುಕೊಳ್ಳುತ್ತದೆ.

* ಸರ್ಕಾರದ ನೀತಿ-ನಿರೂಪಣೆಗಳನ್ನು ಅದರ ಗುರಿಸಾಧನೆಯಿಂದ ಅಳೆಯಬೇಕೇ ಹೊರತು ಉದ್ದೇಶಗಳಿಂದಲ್ಲ.

  • ಶಿಕ್ಷಣಕ್ಕಾಗಿ ಮಾಡುವ ವೆಚ್ಚ ಪೋಷಕರ ಆಯ್ಕೆ ಮತ್ತು ವೈಯಕ್ತಿಕ (ಖಾಸಗಿ) ಸ್ವಾತಂತ್ರದ ಮೂಲಕ ವೆಚ್ಚವಾದಲ್ಲಿ ಮಾತ್ರ ಸಫಲವಾಗುತ್ತದೆ.

* ಘನ ಸರ್ಕಾರಕ್ಕೆ ಸಹಾರಾ ಮರುಭೂಮಿಯ ನಿರ್ವಹಣೆಯನ್ನು ಕೇವಲ ಐದು ವರ್ಷ ನೀಡಿದರೂ ಸಾಕು, ಮರಳಿನ ಅಭಾವ ಸೃಷ್ಟಿಯಾಗಿಬಿಡುತ್ತದೆ.

  • ಪರಿಸರ ಮಾಲಿನ್ಯವನ್ನು ಪೂರಾ ನಿಲ್ಲಿಸಲಿಕ್ಕೆ ಆಗದು. ಕಡಿಮೆ ಮಾಡಬಹುದು ಅಷ್ಟೇ. ಯಾವ ಮಟ್ಟಿಗಿನ ಅಭಿವೃದ್ಧಿ ಮತ್ತು ಮಾಲಿನ್ಯದ ಮೂಲಕ ಬದುಕು ಸಹನೀಯವಾಗುವುದೋ, ಅಷ್ಟರ ಮಟ್ಟಿಗೆ ಪರಿಸರ ಸಂರಕ್ಷಣೆ ಸಾಧ್ಯ.
  • ಏಕಾಂಗಿ ನಡೆವವನೇ ವೇಗವಾಗಿ ಸಾಗುತ್ತಾನೆ.
  • ಆಧಿಕಾರ ಒಂದೇ ಕಡೆ ಕೇಂದ್ರೀಕೃತವಾಗುವುದೇ ಸ್ವಾತಂತ್ರ ದುರ್ಲಭವಾಗಲು ಕಾರಣ.
  • ರೊಟ್ಟಿ ಹಂಚುವ ಕೆಲಸಕ್ಕೆ ಪ್ರಾಮುಖ್ಯತೆ ನೀಡುವ ಸಮಾಜವಾದದ ಬದಲು ರೊಟ್ಟಿ ತಯಾರಿಸುವ ಅಥವಾ ರೊಟ್ಟಿಯ ಗಾತ್ರ ಹೆಚ್ಚಿಸುವ ಬಂಡವಾಳವಾದದ ಬಗ್ಗೆ ಹೆಚ್ಚು ಗಮನ ನೀಡಿ.
  • ಸರಳವಾಗಿ ಹೇಳುವುದಾದರೆ, ಸರ್ಕಾರದ ಗಾತ್ರ ಕಡಿಮೆಯಾದಂತೆ, ಜನರಿಗೆ ಅನುಕೂಲ ಹೆಚ್ಚಾಗುತ್ತಾ ಹೋಗುತ್ತದೆ.
  • ಮೌಲ್ಯಗಳು ಸಮಾಜದಲ್ಲಿ ಇರುವುದಿಲ್ಲ. ಮೌಲ್ಯಗಳು ಜನರ ಬಳಿ ಇರುತ್ತವೆ.
  • ಮುಕ್ತ ಮಾರುಕಟ್ಟೆ ವಿಧಾನವು ಜನರನ್ನು ಬಡತನದಿಂದ ಸಿರಿವಂತಿಕೆಯತ್ತ ಒಯ್ಯುವ ಅತಿ ಸರಳ ವಿಧಾನ.
  • ಯಾವುದೇ ವಿಧಾನದ ಸಫಲತೆಯು ೨೫-೫೦ ವರ್ಷಗಳ ನಂತರ ತಿಳಿಯುವುದು. ವಾದದ ಜನಕನ ಸಹೋದ್ಯೋಗಿಗಳ ಪರಾಮಶೆಯಲ್ಲಲ್ಲ.
  • ಪರಸ್ಪರ ಅನುಕೂಲವಿಲ್ಲದೆಯೇ, ಇಬ್ಬರು ವ್ಯಕ್ತಿಗಳ ನಡುವಣ ಸ್ವಯಂಪ್ರೇರಿತ ವ್ಯಾಪಾರ ನಡೆಯದು. ಈ ತತ್ವವನ್ನು ಮರೆಯುವುದೇ ಬಹುತೇಕ ಆರ್ಥಿಕ ತೊಂದರೆಗಳಿಗೆ ಕಾರಣ.'
  • ಸರ್ಕಾರದ ಅಸ್ತಿತ್ವದ ಕಾರಣ ವ್ಯಕ್ತಿಯೊಬ್ಬ ಮತ್ತೊಬ್ಬನಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವುದು.
  • ಸರ್ಕಾರದ ನೀತಿಗಳು ಉದ್ಯಮಶೀಲತೆಯ ಪರ ಇರಬೇಕು, ಉದ್ಯಮಿಗಳ ಪರ ಅಲ್ಲ; ಇವೆರಡರ ಮಧ್ಯದ ವ್ಯತ್ಯಾಸವನ್ನು ಜನತೆ ಮೊದಲು ಅರಿಯಬೇಕು.
  • ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯ ಅತಿ ದೊಡ್ಡ ಶಕ್ತಿ ಮತ್ತು ಘನತೆ ಎಂದರೆ, ಅದು ವ್ಯಕ್ತಿಯ ಜಾತಿ-ಮತ-ವರ್ಣಕ್ಕೆ ಬೆಲೆ ನೀಡುವುದಿಲ್ಲ. ತನ್ನ ಸಹಜೀವಿಗಳಿಗೆ ಅನುಕೂಲಕರವಾಗಿ ವ್ಯವಹರಿಸಬಲ್ಲ ಗುಣವುಳ್ಳ ವ್ಯಕ್ತಿಗೆ ಅಲ್ಲಿ ಪ್ರಾಧಾನ್ಯತೆ.

[೧]