ಸಾರಾ ಅಬೂಬಕ್ಕರ್
ಗೋಚರ
ಸಾರಾ ಅಬೂಬಕ್ಕರ್ (ಜೂನ್ ೩೦, ೧೯೩೬ - ಜನವರಿ ೧೦, ೨೦೨೩) ಕನ್ನಡದ ಕಥೆಗಾರ್ತಿ, ಕಾದಂಬರಿಗಾರ್ತಿ ಮತ್ತು ಮಹಿಳಾ ಸಂವೇದನೆಯ ಪ್ರಮುಖ ಲೇಖಕಿಯಾಗಿದ್ದರು.
ಉಲ್ಲೇಖಗಳು
[ಸಂಪಾದಿಸಿ]- “ಮದುವೆಯಾದ ಬಳಿಕ ಮನೆಯ ಈ ಬಂಧನದಿಂದ ಬಿಡುಗಡೆ ದೊರೆಯಬಹುದೆಂದುಕೊಂಡಿದ್ದೆ. ಗಂಡ ವಿದ್ಯಾವಂತನಾದರೆ ಆತನಿಗೆ ಧರ್ಮಾಂಧತೆ ಇರಲಾರದು; ಘೋಷಾ ಹಾಕಬೇಕೆಂದು ಪೀಡಿಸಲಾರನೆಂದುಕೊಂಡಿದ್ದೆ. ಹೀಗಾಗಿಯೇ ವಿದ್ಯಾವಂತ ಗಂಡನನ್ನು ಬಯಸಿದ್ದೆ. ಆದರೆ ನಾನು ಬಯಸಿದ್ದೊಂದೂ ಆಗಲೇ ಇಲ್ಲ. ಮದುವೆಯ ಮರುದಿನ ಪ್ರಥಮಬಾರಿ ಗಂಡನ ಮನೆಗೆ ಹೋಗಬೇಕಾದರೆ ಬುರುಕಾ ತೊಡಿಸಿಯೇ ನನ್ನನ್ನು ಕರೆದೊಯ್ದರು...”
- “ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್‌ವರೆಗೆ ಮಾತ್ರ (11ನೇ ತರಗತಿ). ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತು. ಆದರೆ ಅಂದಿನ ಸಮಾಜ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು, ಇದಕ್ಕಾಗಿ ಹೋರಾಡಬೇಕು ಎಂದು ನಾನು ಆಗಲೇ ನಿರ್ಧರಿಸಿಕೊಂಡೆ”
- “ನನ್ನನ್ನು ಕನ್ನಡ ಲೇಖಕಿ ಎಂದು ಗುರುತಿಸಿ. ಮನುಷ್ಯರಾದ ಮೇಲೆ ಮಾನವರಾಗಿ ಬದುಕಬೇಕು. ಈ ಜಾತಿ- ಧರ್ಮ ಎಲ್ಲಾ ಯಾಕೆ ?”
- “ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ ‘ವಹಾದಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ...”
