ವಿಷಯಕ್ಕೆ ಹೋಗು

ಶ್ರೀಕೃಷ್ಣ ಆಲನಹಳ್ಳಿ

ವಿಕಿಕೋಟ್ದಿಂದ

ಶ್ರೀಕೃಷ್ಣ ಆಲನಹಳ್ಳಿ - ಇವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ ೪, ೧೯೮೯ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು. ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ ಸಮೀಕ್ಷಕ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು ಎಷ್ಟು ಒತ್ತಾಯಿಸುತ್ತೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಅವರ ಪ್ರಸಿದ್ಧ ಕವನದಲ್ಲಿ ಬರೆದಿದ್ದರು. ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ಶ್ರೀಕೃಷ್ಣರಿಗೆ ದೊಡ್ಡ ಹೆಸರು ತಂದಿತು. ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ. ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕರು ಮಾತ್ರ ಅಲ್ಲ, ಜನಪ್ರಿಯರೂ ಆಗಿದ್ದರು. ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನರಾದ ನಂತರ ಅವರ “ಭುಜಂಗಯ್ಯನ ದಶಾವತಾರಗಳು” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು. ‘ಗೀಜಗನ ಗೂಡು’ ಟಿ. ಎಸ್. ರಂಗ ಅವರಿಂದ, ‘ಕಾಡು’ ಗಿರೀಶ್ ಕಾರ್ನಾಡ್ ಅವರಿಂದ, ‘ಪರಸಂಗದ ಗೆಂಡೆ ತಿಮ್ಮ ಮಾರುತಿ ಶಿವರಾಂ ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ ಲೋಕೇಶ್ ಅವರಿಂದ ನಿರ್ದೇಶಿಸಲ್ಪಟ್ಟವು. ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು. ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಆದರೆ ಅವರಿಗೆ ಐಶ್ವರ್ಯ ಬಂತೇ? ಬಹುಶಃ ಇಲ್ಲ ಎನ್ನುತ್ತಾರೆ ಅವರ ಅವರ ಅಂದಿನ ಗೆಳೆಯರು. ತೋಟ ಮಾಡಿದರು. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಹೋಗಿಬಿಟ್ಟರು. ‘ಸಮೀಕ್ಷಕ’ ಪ್ರಕಟಿಸುವಾಗಲೂ ಅವರು ಶ್ರೀಮಂತರಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದರು. ತಾಯಿ ಊರಿನಲ್ಲಿ ಇದ್ದರು. ವಿದ್ಯಾರ್ಥಿ ದೆಸೆಯಲ್ಲಿ ಜೆ. ಎಸ್. ಎಸ್ ಹಾಸ್ಟೆಲಿನ ಬಿಟ್ಟಿ ಊಟ, ಗೀತಾ ರಸ್ತೆಯ ಸಂಪಿಗೆ ಮರದ ಕೆಳಗಿನ ಮನೆಗೆ ಹತ್ತು ರೂಪಾಯಿ ಬಾಡಿಗೆ ಕೊಡುವಾಗಲೂ ಪರದಾಡಿ ನೂರೆಂಟು ಸಣ್ಣ ಪುಟ್ಟ ಸಾಲಗಳಲ್ಲಿ ಮುಳುಗಿರುತ್ತಿದ್ದರಂತೆ. ಒಟ್ಟಿನಲ್ಲಿ ಶಿಸ್ತಿನ ಸುವ್ಯವಸ್ಥಿತವಾದ ಬದುಕು ಅವರದ್ದಾಗಿರಲಿಲ್ಲ.. ಹೀಗಿದ್ದರೂ ಅವರು ತಮ್ಮ ಬರಹಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದವರು. ಅವರ ಕೊನೆಯ ಕೃತಿಗಳಾದ “ತಿಕ ಸುಟ್ಟ ದೇವರು”, “ಅರಮನೆ” ಮೊದಲಾದವುಗಳಲ್ಲಿನ ಅವರ ಭಾಷೆಯ ಬಳಕೆ, ಅನುಭವ ಹೆಚ್ಚು ಹೆಚ್ಚು ಮಾಗಿದ್ದು ಕಾಣುತ್ತದೆ. ಅವರು ಶ್ರೇಷ್ಠತೆಯ ಮಟ್ಟ ತಲುಪಿದ್ದರು ಎಂಬುದು ಸಾಹಿತ್ಯ ವಿದ್ವಾಂಸರ ಅಭಿಪ್ರಾಯ. ‘ಮಣ್ಣಿನ ಹಾಡು’ ಅಲ್ಲದೆ ‘ಕಾಡುಗಿಡದ ಹಾಡು ಪಾಡು’, ‘ಡೋಗ್ರಾ ಪಹಾರಿ ಪ್ರೇಮಗೀತೆಗಳು’ ಅವರ ಕಥಾ ಸಂಕಲನಗಳು. ‘ತಪ್ತ’, ‘ಫೀನಿಕ್ಸ್’ ಅವರ ಕಥಾ ಸಂಕಲನಗಳು. ‘ಗ್ರಾಮಾಯಣ ಸಮೀಕ್ಷೆ’, ‘ಅವಲೋಕನ’, ‘ಅಂತಃಕರಣ’ ಅವರ ಸಂಪಾದಿತ ಕೃತಿಗಳು.