ಶಿವಕುಮಾರ ಸ್ವಾಮೀಜಿ

ಡಾ. ಶ್ರೀ ಶಿವಕುಮಾರ ಸ್ವಾಮಿ (ಜನನ: ೧ ಏಪ್ರಿಲ್ ೧೯೦೭ – ನಿಧನ: ೨೧ ಜನವರಿ ೨೦೧೯) ಅವರು ಸಿದ್ದಗಂಗಾ ಮಠದ ಪರಮಪೂಜ್ಯ ಮಠಾಧಿಪತಿಗಳಾಗಿದ್ದು, ಆಧ್ಯಾತ್ಮಿಕತೆ, ಮಾನವೀಯತೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದರು. ಲಿಂಗಾಯತ ಪರಂಪರೆಯ ಮಹಾನ್ ಸಾಧಕರಾಗಿದ್ದ ಇವರು "ಚಲಿಸುವ ದೇವರು" ಎಂಬ ಬಿರುದನ್ನು ಪ್ರಾಪ್ತರಾದರು. ಮಠದ ಆಡಳಿತವನ್ನು ೧೯೩೦ರಲ್ಲಿ ಹೊತ್ತ ಅವರ ನಾಯಕತ್ವದಲ್ಲಿ, ಅನ್ನ, ಅಕ್ಷರ ಮತ್ತು ಜ್ಞಾನದ ದಾಸೋಹ ಎಂಬ ತ್ರಿವಿಧ ಸೇವೆ ಬೆಳೆಯಿತು. ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆಶ್ರಯ, ಭೋಜನ ಮತ್ತು ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರು.ಅವರು ಸ್ಥಾಪಿಸಿದ ಶ್ರೀ ಸಿದ್ದಗಂಗಾ ಎಜುಕೇಶನ್ ಸೊಸೈಟಿ ರಾಜ್ಯದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರು ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯದ ದಾಸೋಹ ತತ್ತ್ವಗಳನ್ನು ತಮ್ಮ ಜೀವನದಲ್ಲಿ ಜೀವನ್ಮೂಲ್ಯವನ್ನಾಗಿ ಮಾಡಿಕೊಂಡಿದ್ದರು. ಪದ್ಮಭೂಷಣ ಪುರಸ್ಕೃತರಾಗಿ, ಸಮಾಜದ ಎಲ್ಲ ವರ್ಗದ ಅಭಿವೃದ್ಧಿಗೆ ಸಮರ್ಪಿತ ಜೀವನ ನಡೆಸಿದ ಅವರು ಧರ್ಮಾತೀತ ಸೇವೆಯ ಉದಾಹರಣೆಯಾಗಿದ್ದಾರೆ.[೧]
ನುಡಿಗಳು
[ಸಂಪಾದಿಸಿ]1) ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.
2) ಶಿಕ್ಷಣ ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.
3) ಮನಸ್ಸು ಪವಿತ್ರವಾದದ್ದು, ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.
4) ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು. ಸಂಕೀರ್ಣ ಸ್ವರೂಪ ಅದರದ್ದು.
5) ನಮ್ಮ ಪೂರ್ವಿಕರು ನಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ. ಮಾನವೀಯತೆ ಅವರ ಜೀವ ಗುಣವಾಗಿತ್ತು.
6) ಸೇವೆ ಎಂಬುದು ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
7) ನಮ್ಮ ಹಿಂದಿನ ಪೂರ್ವಜ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನ ಭಾಗ್ಯ.
8) ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ಮಾತು ತಪಸ್ಸು ಎನ್ನುವಂತಿರಬೇಕು.
9) ಆತ್ಮಾವಲೋಕನದ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನು ಅನುಭವಿಸುತ್ತಿದೆ.
10) ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.
11) ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ. ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
12) ಜಗತ್ತು ವೇಗವಾಗಿ ಮುಂದುವರೆದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
13) ದುಡಿಯದೆ ತಿನ್ನುವುದು ಕೂಳು, ಶ್ರಮ ಜೀವನ ನಡೆಸಿ ಊಟ ಮಾಡುವುದು ಪ್ರಸಾದ.
14) ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
15) ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು. ಸಮಾಜದ ಕಣ್ಣಾಗಬೇಕು.
16) ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ. ಹೃದಯವಂತಿಕೆಯಲ್ಲಿದೆ.
17) ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
18) ಇಂದು ರಾಷ್ಟ್ರಾದ್ಯಂತ್ಯ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.
19) ಜನ ನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.
20) ವ್ಯವಸಾಯ ಎಂಬುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಠಿ ಮಾಡುವ ಅನುಪಮ ಉದ್ಯೋಗ.
21) ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ, ಆ ಶಕ್ತಿ ನಿಕ್ಷೇಪವಾಗಿದೆ.
22) ಕಾಯಕ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.
23) ದೃಷ್ಠಿ ಪವಿತ್ರವಾಗಿರಲಿ. ಭಾವ ಶುದ್ಧವಾಗಿರಲಿ. ಬದುಕು ಭಕ್ತಿಯಿಂದೊಡಗೂಡಿರಲಿ.
24) ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.
25) ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.
26) ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.
27) ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
28) ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು.
29) ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸ ರಕ್ಷೆ.
30) ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ, ಸಂಸಾರ ತೊರೆಯಬೇಕಿಲ್ಲ, ಕಾಡನ್ನು ಸೇರಬೇಕಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.
31) ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ. ಮನಸ್ಸೂ ಅಲ್ಲ. ಈ ಎಲ್ಲವೂಗಳಲ್ಲಿಯೂ ಇರುವ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.
32) ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರುವ ಪುಣ್ಯಶಾಲಿಯೇ ಮಹಾತ್ಮ.
33) ಜಗತ್ತನ್ನು ಬಿಡದೆ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೆ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.
34) ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೆ ನಡೆದುಕೊಳ್ಳುವವನೇ ಧೀರ.
35) ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ, ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.
36) ಪ್ರತಿದಿನ ಮಲಗುವ ಮುನ್ನ ನಡೆ ನುಡಿಗಳು, ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.[೨]
ಉಲ್ಲೇಖಗಳು
[ಸಂಪಾದಿಸಿ]- ↑ "ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ". Archived from the original on 2018-12-27. Retrieved 2019-01-21.
- ↑ https://kannadadeevige.in/shivakumara-swamiji-quotes-in-kannada/
