ರಾಜಾ ರಾವ್
ರಾಜಾ ರಾವ್(ನವೆಂಬರ್ ೦೮, ೧೯೦೮ - ಜುಲೈ ೦೮ ೨೦೦೬) - ಇವರು ನವೆಂಬರ್ ೦೮, ೧೯೦೮ರಂದು ಅಂದಿನ ಮೈಸೂರು ಸಂಸ್ಥಾನದ ಹಾಸನದಲ್ಲಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು.ಇವರ ತಂದೆ ಒಬ್ಬ ಶಿಕ್ಷಕರಾಗಿದ್ದರು. ಅವರ ಪ್ರಾಥಮಿಕ ಶಿಕ್ಷಣವೆಲ್ಲಾ ಹೈದರಾಬಾದ್‍ನಲ್ಲಿ ಕೈಗೂಡಿತು. ಹಾಗು ಅವರು ಅಲಿಗಢ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗು ಇತಿಹಾಸದಲ್ಲಿ ಬಿ.ಎ. ಪದವಿಯನ್ನು ೧೯೨೯ರಲ್ಲಿ ಪಡೆದರು. ಕನ್ನಡಿಗರಾದ ಇವರು ಆಂಗ್ಲ ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ. ೧೯೬೦ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು. ರಾಜಾ ರಾಯರು ಒಮ್ಮೆ "ಬರೆಯುವುದೇ ನನ್ನ ಧರ್ಮ" ಎಂದು ಹೇಳಿದ್ದರು. ೧೯೩೧ರಲ್ಲಿ ಇವರು ಫ್ರೆಂಚ ಮಹಿಳೆ ಕೆಮಿಲ್ಲೆ ಮೌಲಿಯವರನ್ನು ಮದುವೆಯಾದರು.(ಈ ದಾಂಪತ್ಯ ಆನಂತರ ವಿಚ್ಛೇದನದಲ್ಲಿ ಕೊನೆಗಂಡಿತು). ಮುಂದೆ ೧೯೬೫ರಲ್ಲಿ ಕ್ಯಾಥರೀನ್ ಜೋನ್ಸ್ ಎಂಬ ರಂಗ ಕಲಾವಿದೆಯನ್ನು ಮದುವೆಯಾದರು. ಇವರ ಮಗನ ಹೆಸರು ಕ್ರಿಸ್ಟೋಫರ್ ರಾಮ. ತದನಂತರ ೧೯೮೬ರಲ್ಲಿ ರಾಜಾರಾವ್ ಕ್ಯಾಥರೀನ್‌ರವರಿಗೆ ವಿಚ್ಛೇದನ ನೀಡಿ ಸೂಸಾನ್ ಎನ್ನುವವರ ಜೊತೆ ಮದುವೆಯಾದರು.