ಮುಕ್ತಾಯಕ್ಕನ ವಚನ
ಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು. ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ 'ಮಸಳಿಕಲ್ಲು' ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ಶತಮಾನದ ಶಿವಶರಣೆಯರ ಸಮೂಹದ ಆಧ್ಯಾತ್ಮಿಕ ಸಿದ್ದಾಂತದ ವಿಷಯದಲ್ಲಿ, ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರುತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ, ತಾತ್ವಿಕ ಪರಿಜ್ಞಾನದ, ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ. ಕಾಯದ ಸೀಮೆಯ, ಭಾವದ ಭ್ರಾಂತಿಯ, ಜೀವ ಮಾಯೆಯನ್ನು ಕಳೆದುಕೊಂಡರೂ ದ್ವೇತಾದ್ವೇತದ ಸಾಕಾರ, ನಿರಾಕಾರದ ನಾನು-ನೀನುಎಂಬ ವಿಭಿನ್ನ ತಿಳುವಳಿಕೆಯ ತಿಮಿರದಂಚಿನಲಿ ಸಿಲುಕಿ ತೊಳಲಾಡುವ ಸಾಧಕಿಯಾಗಿ ಮುಕ್ತಾಯಕ್ಕ ನಮಗೆ ಕಾಣಿಸುತ್ತಾಳೆ. ಅವಳು ತನ್ನ ವಚನಗಳಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಮರುಳ ಶಂಕರದೇವ ಮುಂತಾದ ಶರಣರ ಕಾರುಣ್ಯದಿಂದ ತಾನು ಪರಿಣಾಮಿಯಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ. ಮುಕ್ತಾಯಕ್ಕ ಸುಮಾರು 37 ವಚನಗಳನ್ನು ರಚಿಸಿದ್ದಾರೆ,[೧] ಇವುಗಳಲ್ಲಿ ಕೆಲವು ಅಜಗಣ್ಣನ ಅಂಕಿತದೊಂದಿಗೆ ಇವೆ. ಅವರ ವಚನಗಳಲ್ಲಿ ಆಧ್ಯಾತ್ಮಿಕ ಚಿಂತನೆಗಳು ಮತ್ತು ಸಾಮಾಜಿಕ ಕಾಳಜಿಗಳನ್ನು ಕಾಣಬಹುದು.
ವಚನಗಳು
[ಸಂಪಾದಿಸಿ]- ಅಂಧಕನ ಕೈಯ
ಅಂಧಕನ ಹಿಡಿದಂತಿರಬೇಕು. ಮೂಗಿನ ಕೈಯಲ್ಲಿ ಕಾವ್ಯವ ಕೇಳಿದಂತೆ ಇರಬೇಕು. ದರ್ಪಣದೊಳಗಣ ಪ್ರತಿಬಿಂಬದಂತೆ ಹಿಡಿವರಿಗಳವಲ್ಲದಿರಬೇಕು ಅಣ್ಣಾ. ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ ಆರೂಢಗೆಟ್ಟೆಯೋ ಅಜಗಣ್ಣ.
- ಅಲರೊಡಗಿದ ಪರಿಮಳದಂತೆ,
ಪತಂಗದೊಳಡಗಿದ ಅನಲನಂತೆ, ಶಶಿಯೊಳಡಗಿದ ಷೋಡಶಕಳೆಯಂತೆ, ಹುಳುಹಡಗಿದ ವಾಯುವಿನಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣತಂದೆಯಂತೆ.
- ನುಡಿಯಲು ಬಾರದು ಕೆಟ್ಟನುಡಿಗಳ,
ನಡೆಯಲು ಬಾರದು ಕೆಟ್ಟನಡೆಗಳ, ನುಡಿದಡೇನು ನುಡಿಯದಿರ್ದಡೇನು? ಹಿಡಿದ ವ್ರತ ಬಿಡದಿರಲು, ಅದೇ ಮಹಾಜ್ಞನದಾಚರಣೆ ಎಂಬೆನು ಅಜಗಣ್ಣ ತಂದೆ
- ಸತ್ಯವುಳ್ಳಲ್ಲಿ ಎಂಬುದು ಹಿಂಗದು;
ಭಾವವುಳ್ಳಲ್ಲಿ ಭಕ್ತಿ ಹಿಂಗಾರು. ಮೂರು ಲೋಕದ ಶಬುದವೇನಯ್ಯಾ? ಮುಕುತಿಯನೇವೆನಯ್ಯಾ ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು ನಾಚಿದನಜಗಣ್ಣ ತಂದೆ.
- ಆರು ಇಲ್ಲದವಳೆಂದು
ಆಳಿಗೊಳಲು ಬೇಡ ಆಳಿಗೊಂಡೆಡೆ ಆನು ಅಂಜುವವಳಲ್ಲ ಒಲವಿನ ಒತ್ತೆ ಕಲ್ಲನು ಬೆವರಿಸಬಲ್ಲೆ ಕಾಣಿರೊ ಅಪ್ಪಿದವರನಪ್ಪಿದಡೆ ತರಗೆಲೆಯಂತೆ ರಸವನು ಅರಸಿದಡುಂಟೇ ಅಜಗಣ್ಣ ತಂದೆ.
- ಉಟ್ಟುದ ತೊರೆದವಂಗೆ ಊರೇನು, ಕಾಡೇನು ?
ನಷ್ಟಸಂತಾನಕ್ಕೆ ಕುಲವೇನು, ಛಲವೇನು ? ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು ? ಅದು ಕೆಟ್ಟದು ಕೆಟ್ಟದು. ನಿನ್ನ ನೀನರಿಯದೆ ಬಟ್ಟಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣತಂದೆ!