ಬಾಲ ಗಂಗಾಧರ ತಿಲಕ
ಬಾಲ ಗಂಗಾಧರ ತಿಲಕ - ಇವರು ಹುಟ್ಟಿದ್ದು ೧೮೫೬ರ ಜುಲೈ ೨೩, ಇವರು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು, ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ತಿಲಕರು ಸ್ಥಾಪಿಸಿದ "ಕೇಸರಿ" ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು, ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. ೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ-ಸೌಮ್ಯವಾದೀ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದೀ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್ ರ ಬೆಂಬಲವಿತ್ತು.೧೯೦೭ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ,ಪಾಲ್ ಹಾಗೂ ರಾಯ್ ನೇತ್ಳತ್ವದಲ್ಲಿ "ಗರಂ ದಳ" ("ಬಿಸಿ ಗುಂಪು") ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ "ನರಂ ದಳ" ("ಮೆದು ಗುಂಪು") ಎಂದು ಇಭ್ಭಾಗವಾಯಿತು. ರಾಜದ್ರೋಹದ ಆರೋಪದ ಮೇಲೆ ೧೯೦೬ರಲ್ಲಿ ಬಂಧನಕ್ಕೊಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ, ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, ೧೯೦೮ ರಿಂದ ೧೯೧೪ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು, ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಹ ಒಟ್ಟುಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟ ಶುರು ಮಾಡಿದರು.