ವಿಷಯಕ್ಕೆ ಹೋಗು

ಗೊರೂರು ರಾಮಸ್ವಾಮಿ ಅಯ್ಯಂಗಾರ್

ವಿಕಿಕೋಟ್ದಿಂದ

ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೨೮, ೧೯೯೧) - ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ೧೯೦೪ರ ಜುಲೈ ೪ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು. ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ರವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಕಾವ್ಯನಾಮ - ಸೀತಾತನಯ. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ. ಇವರ ತಂದೆಯ ಹೆಸರು ಶ್ರೀನಿವಾಸ ಅಯ್ಯಂಗಾರ್, ತಾಯಿಯ ಹೆಸರು ಲಕ್ಷಮ್ಮ. ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು. ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು. ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು. ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು. ೧೯೩೩ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. ೧೯೪೨ರ ‘ಚಲೇ ಜಾವ್’ ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.

ಉಲ್ಲೇಖಗಳು

[ಸಂಪಾದಿಸಿ]

https://kn.wikipedia.org/wiki/%E0%B2%97%E0%B3%8A%E0%B2%B0%E0%B3%82%E0%B2%B0%E0%B3%81_%E0%B2%B0%E0%B2%BE%E0%B2%AE%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF_%E0%B2%85%E0%B2%AF%E0%B3%8D%E0%B2%AF%E0%B2%82%E0%B2%97%E0%B2%BE%E0%B2%B0%E0%B3%8D