ಕಮಲಾ ಹಂಪನಾ
ಕಮಲಾ ಹಂಪನಾ ಇವರು ಕನ್ನಡದ ಪ್ರಸಿದ್ಧ ಲೇಖಕರು. ಇವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಕೊಡುಗೆಗಳನ್ನು ನೀಡಿದ್ದಾರೆ. ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ೨೮-೧೦-೧೯೩೫ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರಿದು ೧೯೫೫-೫೮ರಲ್ಲಿ ಬಿ.ಎ. ಆನರ್ಸ್ ಮಾಡಿದರು. ೧೯೫೯ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಹಂ.ಪ.ನಾಗರಾಜಯ್ಯನವರು ಇವರ ಪತಿ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಅವರ ಸಂಶೋಧನೆಗಳು ಅವರಿಗೆ ಗೌರವಗಳನ್ನು ತಂದುಕೊಟ್ಟಿವೆ. ಜೈನ ಕೃತಿಗಳನ್ನು ಕುರಿತು ಆಳವಾದ ವಿವೇಚನೆಯನ್ನು ಒಳನೋಟವನ್ನು ಅವರು ತಮ್ಮ ಬರಹಗಳಲ್ಲಿ ಹೊಮ್ಮಿಸಿದ್ದಾರೆ.