ವಿಷಯಕ್ಕೆ ಹೋಗು

ಕಬೀರ್

ವಿಕಿಕೋಟ್ದಿಂದ

ಕಬೀರ್ (ಸುಮಾರು ೧೪೪೦-೧೫೧೮) - ಭರತ ವರ್ಷದ ಉತ್ತರ ಭಾಗಗಳಲ್ಲಿ, ಬಹಳವಾಗಿ ಪ್ರಚಾರಕ್ಕೆ ಬಂದ ಒಂದು ಧರ್ಮ ಪಂಥದ ಸ್ಥಾಪಕ. ಹುಟ್ಟಿದ್ದು ವಾರಾಣಸಿಯಲ್ಲಿ. ಅಲ್ಲಿಯ ಮುಸಲ್ಮಾನ ನೇಯ್ಗೆಕಾರ ಒಬ್ಬ ಊರಿಂದ ಕೆಲವು ಮೈಲಿಗಳ ದೂರದ ಲಹರ್ ತಲಾವ್ ಎಂಬ ಕೆರೆಯಲ್ಲಿ ತೇಲುತ್ತಿದ್ದ ಮಗುವೊಂದನ್ನು ಕಂಡು ಎತ್ತಿಕೊಂಡು ಮನೆಗೆ ತಂದನಂತೆ. ಅವನ ಹೆಂಡತಿ ಮಗುವನ್ನು ಸಾಕಿದಳು. ಅವರು ಅದಕ್ಕೆ ಕಬೀರ್ ಎಂದು ಹೆಸರಿಟ್ಟರು. ಕಬೀರ್ ಎಂದರೆ ಅರಬ್ಬೀಭಾಷೆಯಲ್ಲಿ ಮಹಾನ್ ಎಂದು ಅರ್ಥ. ಬೆಳೆಯುವ ದಿನದಲ್ಲಿ ಗೋಸಾಯಿ ಅಷ್ಟಾವಂದ್ ಎಂಬಾತನ ಪ್ರಭಾವದಿಂದ ಕಬೀರ್ ದೇವರನ್ನು ಹರಿ ಎಂದೂ ರಾಮ ಎಂದೂ ಕರೆದ. ಮುಸ್ಲಿಂ ಜನ ಇವನನ್ನು ಧರ್ಮಭ್ರಷ್ಟ ಎಂದು ದೂರಿದರು. ಧರ್ಮಭ್ರಷ್ಟ ನಾನಲ್ಲ, ಕೆಟ್ಟ ಬಾಳು ನಡೆಸುವ ಜನ ಧರ್ಮಭ್ರಷ್ಟರು ಎಂದು ಪ್ರತಿ ಹೇಳಿದ. ಜಾತಿಮುಖ್ಯವಲ್ಲ. ಗುಣ ಮುಖ್ಯ ಎಂಬ ನಂಬಿಕೆಯಲ್ಲಿ ನಡೆದು ಕಬೀರ್ ಜನರಲ್ಲಿ ಒಬ್ಬ ಪ್ರಮುಖನಾಗಿ ನಿಂತ. ಕಬೀರ್ ಒಮ್ಮೆ ಜನಿವಾರ ಹಾಕಿಕೊಂಡು ತಾನು ದ್ವಿಜನಾದೆ ಎಂದನಂತೆ. ಒಬ್ಬ ಬ್ರಾಹ್ಮಣ ಈ ನಡತೆಯನ್ನು ನಿಷೇಧಿಸಿದ. ಜನಿವಾರ ಹೃದಯದಲ್ಲಿ ದೇವರಿರುವುದರ ಗುರುತು. ನನ್ನ ಹೃದಯದಲ್ಲಿ ದೇವರಿದ್ದಾನೆ. ನಿನ್ನ ಹೃದಯದಲ್ಲಿಲ್ಲ. ಇದನ್ನು ಹಾಕಿಕೊಳ್ಳುವುದಕ್ಕೆ ನಿನಗಿಂತ ನನಗೆ ಹೆಚ್ಚು ಅಧಿಕಾರ-ಎಂದು ಕಬೀರ್ ಕೇಳಿದನಂತೆ. ದಿನ ಕಳೆದಂತೆ ಜನ ಇವನನ್ನು ಒಬ್ಬ ಸಂತನೆಂದು, ಗುರು ಎಂದು ಒಪ್ಪಿಕೊಂಡರು. ಶುಷ್ಕ ಆಚಾರ, ಭಾವಹೀನ ಪುಜನ ಇಂಥ ವ್ಯರ್ಥವರ್ತನವನ್ನು ಕಬೀರ್ ಖಂಡಿಸಿ, ನಿಷ್ಕಾಮಕರ್ಮದ ಉಪದೇಶಕನಾದ. ರಾಮಾನಂದನಲ್ಲಿಗೆ ಹೋಗಿ ಅವನನ್ನು ಗುರುವಾಗಿ ಸ್ವೀಕರಿಸಿದ. ದೇವರನ್ನು ರಾಮ ಎಂದು ರಹೀಮ್ ಎಂದು ಹೇಗೆ ಕರೆದರೂ ಸರಿಯೇ, ಭಕ್ತಿಯಿಂದ ಕರೆಯಿರಿ, ಎಂದು ಹೇಳಿ ಕಬೀರ್ ಆಚಾರವಂತ ಹಿಂದೂ ಆಚಾರವಂತ ಮುಸಲ್ಮಾನ ಇವರ ಎರಡು ಸಮುದಾಯವನ್ನೂ ಹಗೆ ಮಾಡಿಕೊಂಡ. ಆದರೆ ಇವನನ್ನು ಮೆಚ್ಚಿ ಅನೇಕ ಜನ ಇವನ ಅನುಯಾಯಿಗಳಾದರು. ತನ್ನ ಶುದ್ಧ ಜೀವನದಿಂದ ಕಬೀರ್ ಅನೇಕ ಸಿದ್ಧಿಗಳನ್ನು ಗಳಿಸಿದ. ಇವನ ಮಹಿಮೆಯನ್ನು ಕೇಳಿ ಬಾದಷಹ ಸಿಕಂದರ್ ಲೋದಿ ಇವನಿಗೆ ಹಣವನ್ನು, ನೆಲವನ್ನು ಕೊಡುವೆನೆಂದ. ಕಬೀರ್ ಅವನ್ನು ಸ್ವೀಕರಿಸಲಿಲ್ಲ. ಕಬೀರನನ್ನು ಕುರಿತು ಅನೇಕ ಪವಾಡ ಕಥೆಗಳಿವೆ. ಧರ್ಮವನ್ನು ಕುರಿತು ವಾದಿಸಲು ಬಂದ ಅನೇಕರನ್ನು ಕಬೀರ್ ಸೋಲಿಸಿದ. ಅದಕ್ಕೂ ಹೆಚ್ಚಿನ ಸಂಗತಿ ಇವನ ಹಗೆಗಳು ಇವನಿಗೆ ಒಡ್ಡಿದ ಪ್ರಲೋಭನ, ವಿಷಪರೀಕ್ಷೆಗಳಲ್ಲಿ ಇವನು ಸೋಲದೆ ನಿಂತದ್ದು. ವಾರಾಣಸಿ ಪುಣ್ಯಕ್ಷೇತ್ರ, ಅಲ್ಲಿ ಸತ್ತವರಿಗೆ ಮುಕ್ತಿ-ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ತೋರಿಸುವುದಕ್ಕೆ ಕಬೀರ್ ಇಲ್ಲಿ ಸತ್ತವರು ಕತ್ತೆಯಾಗಿ ಹುಟ್ಟುತ್ತಾರೆ ಎಂದು ಪ್ರತೀತಿ ಪಡೆದಿದ್ದ ಮಗಹರ ಎಂಬ ಸ್ಥಳದಲ್ಲಿ ನಿಂತು ಅಲ್ಲಿ ತೀರಿಕೊಂಡನಂತೆ. ಜನ ಮಹನೀಯರೆಂದು ಗಣಿಸಿರುವ ಇಂಥ ಇತರ ಹಿರಿಯರ ವಿಷಯದಲ್ಲಿ ಬೆಳೆದಿರುವಂತೆ ಇವನ ವಿಷಯದಲ್ಲೂ ಒಂದು ಕಥೆ ಬೆಳೆದಿದೆ. ಶಿಷ್ಯರಲ್ಲಿ ಹಿಂದೂಗಳಾದವರು ಇವನ ದೇಹವನ್ನು ಸುಡಬೇಕೆಂದೂ ಮುಸಲ್ಮಾನರು ಹೂಳಬೇಕೆಂದೂ ಅಪೇಕ್ಷಿಸಿದರು. ದೇಹ ಇವರಿಗೂ ಸಿಕ್ಕಲಿಲ್ಲ. ಅವರಿಗೂ ಸಿಕ್ಕಲಿಲ್ಲ. ಅದಕ್ಕೆ ಹೊದಿಸಿದ್ದ ಹಚ್ಚಡವನ್ನು ತೆಗೆದು ನೋಡಿದಾಗ ಅದರಡಿ ಒಂದಿಷ್ಟು ಹೂವಿನ ರಾಶಿ ಮಾತ್ರ ಇತ್ತು.ಕಬೀರನ ಪದ್ಯಗಳು ಹಿಂದೀ ಭಾಷೆಯ ರೂಪಾಂತವಾದ ಅವಧಿ ಭಾಷೆಯಲ್ಲಿದೆ. ಇವನ ಕವಿತೆಗಳು ಕೃತಕ ಶೈಲಿಯಲ್ಲಿದೆ ಸಹಜವಾಗಿ ಹೃದಯದಿಂದ ಹೊರಹೊಮ್ಮಿದ ಮಾತುಗಳಂತೆ ಇವೆ. ಸು. ೧೫೭೦ರಲ್ಲಿ ಕಬೀರನ ಪದ್ಯಗಳ ವಚನಗಳ ಸಂಕಲನ ಬೀಜಕ್ ಎಂಬ ಹೆಸರಿನಿಂದ ಪ್ರಕಟವಾಯಿತು. ಇದಾದ ಸು. ೩೦ ವರ್ಷಗಳ ಅನಂತರ ಇವನ ವಚನಗಳು ಸಿಖ್ಖರ ಗ್ರಂಥದೊಳಗೆ ಅಳವಟ್ಟುವು. ಕಬೀರನ ಅನುಯಾಯಿಗಳು ಕಬೀರ ಪಂಥಿಗಳೆಂದು ಕರೆದುಕೊಂಡಿದ್ದಾರೆ.


ಉಕ್ತಿಗಳು

[ಸಂಪಾದಿಸಿ]
  • "ಪ್ರತಿ ಉಸಿರಿನಲ್ಲಿಯೂ ಜೀವ ಇರುವಂತೆ, ಭಗವಂತ ನನ್ನಲ್ಲಿದ್ದಾನೆ, ಭಗವಂತ ನಿನ್ನಲ್ಲಿದ್ದಾನೆ."
  • "ರಾಮ, ಕೃಷ್ಣ, ಹರಿ ಅಥವಾ ಬುದ್ಧ, ನೀವು ಇಷ್ಟಪಡುವ ಯಾವುದೇ ಹೆಸರಿನಿಂದ ಅವನನ್ನು ಕರೆಯಿರಿ, ಅವನು ಇನ್ನೂ ಒಬ್ಬನೇ."
  • "ಭಕ್ತಿಯ ಮಾರ್ಗವು ಸುಲಭವಲ್ಲ, ಆದರೆ ಅದು ಅತ್ಯಂತ ಪ್ರತಿಫಲದಾಯಕವಾಗಿದೆ."
  • "ಲೌಕಿಕ ಆಸ್ತಿಗಳಿಗೆ ಅಂಟಿಕೊಳ್ಳಬೇಡಿ."
  • "ಅಂತಿಮ ವಾಸ್ತವವು ಮಾನವ ಗ್ರಹಿಕೆಗೆ ಮೀರಿದ್ದು."
"https://kn.wikiquote.org/w/index.php?title=ಕಬೀರ್&oldid=11066" ಇಂದ ಪಡೆಯಲ್ಪಟ್ಟಿದೆ