ಅಲ್ಲಮಪ್ರಭು
ಅಲ್ಲಮಪ್ರಭು ೧೨ನೇ ಶತಮಾನದ ಶರಣರಲ್ಲಿ ಪ್ರಮುಖರಾದವರು ಮತ್ತು ವಚನ ಸಾಹಿತ್ಯದ ಪ್ರಮುಖ ವ್ಯಕ್ತಿ. ಅವರು ಶಿವಶರಣರಾಗಿದ್ದು, ಅನುಭಾವ ಮಂಟಪದ ಅಧ್ಯಕ್ಷರಾಗಿದ್ದರು. ಅವರ ವಚನಗಳು ಗಹನವಾದ ತಾತ್ವಿಕ ವಿಚಾರಗಳನ್ನು ಒಳಗೊಂಡಿವೆ ಮತ್ತು ಅಧ್ಯಾತ್ಮಿಕ ಅನುಭವಗಳನ್ನು ವ್ಯಕ್ತಪಡಿಸುತ್ತವೆ. ಅವರ ವಚನಗಳ ಅಂಕಿತ ನಾಮ "ಗುಹೇಶ್ವರ" ಅಥವಾ "ಗೊಹೇಶ್ವರ" ಆಗಿದೆ.[೧] ಅಲ್ಲಮಪ್ರಭು ಅವರು ಶಿವಶರಣ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಬಸವಣ್ಣನವರ ಸಮಕಾಲೀನರಾಗಿದ್ದರು. ಅವರು ಅನುಭಾವ ಮಂಟಪದ ಅಧ್ಯಕ್ಷರಾಗಿ, ಶರಣರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸಿದರು. ಅವರ ವಚನಗಳು ಗಹನವಾದ ಆಧ್ಯಾತ್ಮಿಕ ವಿಚಾರಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸುತ್ತವೆ. ಅವರ ವಚನಗಳಲ್ಲಿ ಬಳಕೆಯಾದ ರೂಪಕ ಭಾಷೆ, ಸಾಮಾನ್ಯ ಜನರಿಗೆ ಅರಿವಾಗುವುದು ಕಷ್ಟವಾದರೂ, ಅನುಭಾವಿಗಳಿಗೆ ಅರ್ಥವಾಗುವಂತಹದ್ದು. ಅಲ್ಲಮಪ್ರಭು ಅವರ ಜೀವನದ ಬಗ್ಗೆ ಹರಿಹರ ಮತ್ತು ಚಾಮರಸರು ಬೇರೆ ಬೇರೆ ಕಥೆಗಳನ್ನು ಹೇಳಿದ್ದಾರೆ.
ವಚನಗಳು
[ಸಂಪಾದಿಸಿ]ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
- "ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು. ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು. ಅಂತಪ್ಪ ಸ್ವರೂಪಿನ ಬೆಡಗು ತಾನೆ ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ."
- ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು ಸುರಾಳನಿರಾಳವಿಲ್ಲದಂದು ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು.
- ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಕನರಕ ಗುಹೇಶ್ವರ.
- ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.
- ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
- ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ. ಮನಬಂದ ಪರಿಯಲ್ಲಿ ನುಡಿವಿರಿ, ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
- ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ ?
ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ ? ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು. ನೀ'ನಾ’ ಎಂಬುದೆ?-ತೆರಹಿಲ್ಲ ಗುಹೇಶ್ವರಾ.
- ಅಂಗೈಯೊಳಗಣ ಸಿಂಹಾಸನವಿದೇನೊ?
ಅಂಗೈಯ ಮೇಲೆ ಸಿಂಹಾಸನವೆಂದೇನೊ? ಧೂಪ ದೀಪ ನಿವಾಳಿಯೆಂದೇನೊ? ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ? ಗುಹೇಶ್ವರನೆಂಬ ನಿರಾಳ !
ಉಲ್ಲೇಖಗಳು
[ಸಂಪಾದಿಸಿ]