ವಿಷಯಕ್ಕೆ ಹೋಗು

ಅಕ್ಕಮ್ಮ

ವಿಕಿಕೋಟ್ದಿಂದ
(ಅಕ್ಕಮ್ಮನ ವಚನಗಳು ಇಂದ ಪುನರ್ನಿರ್ದೇಶಿತ)

ಅಕ್ಕಮ್ಮ ಕನ್ನಡ ಸಾಹಿತ್ಯದ ಪ್ರಮುಖ ವಚನಕಾರರಲ್ಲಿ ಒಬ್ಬರು ಮತ್ತು ಶಿವಶರಣೆ. ಅವರು ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ವಚನಗಳು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಸಹಾಯಕವಾಗಿವೆ. ಅಕ್ಕಮ್ಮನವರ ವಚನಗಳು ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯದಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿವೆ. ಅವರ ವಚನಗಳು ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತವೆ.

ವಚನಗಳು

[ಸಂಪಾದಿಸಿ]

ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ
ಬೆಳೆದಡೆ ಮನೆಗೆ ತರಲಿಲ್ಲ ತರಲಿಲ್ಲದ ಮತ್ತೆ ಅಡಲಿಲ್ಲ
ಅದು ದೀಪದ ಬೆಳಗಿಂಗೆ ದೇವರಿಗೆ ನಿಹಿತವಲ್ಲ,
ಅದು ರಾಕ್ಷಸವಂಶಭೂತವಾದ ಕಾರಣ.
ಕಂಡುದ ಬಿಟ್ಟು ಕಾಣದುದನರಸಿಕೊಳಬೇಕು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಮುಕ್ತನ ನೇಮ.

 ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು,
ಸದಾಚಾರಿಗಳೆಲ್ಲಾ ಬನ್ನಿರಿಂದು,
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ
ದ್ರವ್ಯದ ಮುಖದಿಂದ ಸರ್ವರ ಕೂಡಿ ತಪ್ಪನೊಪ್ಪಗೊಳ್ಳಿಯೆಂದು
ದಿಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು
ಕೀಲಿಗೆ ದೇವಾಲಯವ ನೋಡುವವನಂತೆ,
ಕಂಬಳಕ್ಕೆ ಅಮಂಗಲವ ತಿಂಬವನಂತೆ, ಇವನ ದಂದುಗವ ನೋಡಾ ?
ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.

 ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಘಟಕ್ಕೆಲ್ಲಕ್ಕೂ
ಶಿವಲಿಂಗಪೂಜೆ, ಪಂಚಾಚಾರಶುದ್ಧ ನೇಮ.
ಭಾವ ತಪ್ಪದೆ ಪಾದೋದಕ ಪ್ರಸಾದವಿಲ್ಲದೆ
ತೃಣ ಉದಕವ ಮುಟ್ಟಿದಡೆ
ಎನ್ನ ಸೀಮೆಗೆ, ಎನ್ನ ವ್ರತಾಚಾರಕ್ಕೆ, ನಾ ಕೊಂಡ ಗಮನಕ್ಕೆ
ತನುವಿಗೆ ಬಂದಲ್ಲಿ ಭೀತಿ, ಆತ್ಮಕ್ಕೆ ಬಂದಲ್ಲಿ ಸಂದೇಹವ ಮಾಡಿದಡೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.

ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ
ಅಂಗಳ ಬಾಗಿಲಲ್ಲಿ ಗುಡಿಗೂರಿ ಎನಬಹುದೆ !
ಒಡೆಯರಂತೆ, ಮನೆಗೊಡೆಯನಂತೆ ಗಡಿತಡಿಯಲ್ಲಿ ಕಾಯಲುಂಟೆ !
ಅದು ತುಡುಗುಣಿಕಾರರ ನೇಮ.
ಒಡೆಯರತ್ತ ನಾವಿತ್ತ.
ಗಡಿಗೆಯ ತುಪ್ಪ, ಹೆಡಿಗೆಯ ಮೃಷ್ಟಾನ್ನತುಡುಗುಣಿಯಂತೆ ತಿಂಬವಂಗೆ
ಮತ್ತೊಡೆಯರ ಕಟ್ಟಳೆಯೆ !
ಇಂತೀ ಕಡುಕರ ಕಂಡು ಅಂಜಿದೆಯಲ್ಲಾ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ !

ಕಂಗಳ ಮುಂದೆ ಕಂಡಂತೆ ಕಾಣಬಹುದೆ
ಮನ ನೆನೆದಂತೆ ಆಡಬಹುದೆ
ಕಂಡಕಂಡವರಲ್ಲಿ ಸಂಗವ ಮಾಡಬಹುದೆ
ಅದು ಸ್ವಾನುಭಾವರಿಗೆ ಸಲ್ಲದ ಮತ.
ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ,
ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ
ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು
ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ.[]

ಉಲ್ಲೇಖಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:
"https://kn.wikiquote.org/w/index.php?title=ಅಕ್ಕಮ್ಮ&oldid=15095" ಇಂದ ಪಡೆಯಲ್ಪಟ್ಟಿದೆ